ಜಾರ್ಜಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ -
ಸೋವಿಯೆತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ 15 ಘಟಕ ಗಣರಾಜ್ಯಗಳಲ್ಲಿ ಒಂದು. ಪಶ್ಚಿಮ ಟ್ರಾನ್ಸ್‍ಕಾಕೇಷಿಯದಲ್ಲಿದೆ. ಇದು ಆಬ್ಕೇಜಿûೀಯನ್ ಮತ್ತು ಅಜಾರ್ ಸ್ವಯಮಾಡಳಿತ ಸೋವಿಯೆತ್ ಸಮಾಜವಾದಿ ಗಣರಾಜ್ಯಗಳನ್ನೂ ದಕ್ಷಿಣ ಆಸೀಷ್ಯನ್ ಸ್ವಯಮಾಡಳಿತ ಅಬ್ಲಾಸ್ಟನ್ನೂ ಒಳಗೊಂಡಿದೆ. ಉತ್ತರದಲ್ಲಿ ರಷ್ಯನ್ ಸೋವಿಯೆತ್ ಸಂಯುಕ್ತ ಸಮಾಜವಾದಿ ಗಣರಾಜ್ಯ, ಪೂರ್ವದಲ್ಲಿ ಆಜûರ್‍ಬೈಜಾನ್ ಸೋವಿಯೆತ್ ಸಮಾಜವಾದಿ ಗಣರಾಜ್ಯ, ದಕ್ಷಿಣದಲ್ಲಿ ಆರ್ಮೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ ಮತ್ತು ತುರ್ಕಿ, ಪಶ್ಚಿಮದಲ್ಲಿ ಕಪ್ಪು ಸಮುದ್ರ-ಇವು ಇದರ ಮೇರೆಗಳು. ವಿಸ್ತೀರ್ಣ 26,911 ಚ.ಮೈ. ಜನಸಂಖ್ಯೆ 46,88,000 (1971). ರಾಜಧಾನಿ ಟ್‍ಬಿಲಿಸೀ (8,89,000).
ಮೇಲ್ಮೈ ಲಕ್ಷಣ : ಜಾರ್ಜಿಯದಲ್ಲಿ ಮೂರು ಸ್ವಾಭಾವಿಕ ವಿಭಾಗಗಳಿವೆ: ಉತ್ತರದಲ್ಲಿ ಮಹಾ ಕಾಕಸಸ್ ಶ್ರೇಣಿಯಿದೆ. ಮಧ್ಯದ್ದು ತಗ್ಗು ಪ್ರದೇಶ. ದಕ್ಷಿಣದಲ್ಲಿ ಟ್ರಾನ್ಸ್ ಕಾಕೇಷಿಯ ಪರ್ವತಗಳಿವೆ. ಷ್‍ಕಾರಾ (17,063). ಜಂಗಿಟೌ (16,565), ಕeóïಬೈಕ್ (16,558), ಉಷ್ಬಾ (15,453)-ಇವು ರಾಜ್ಯದಲ್ಲಿರುವ ಕಾಕಸಸ್ ಶ್ರೇಣಿಯ ಉನ್ನತ ಶಿಖರಗಳು. ಅನೇಕ ಶಿಖರಗಳು ಹಿಮಾಚ್ಛಾದಿತ. ಇಲ್ಲಿ ಹುಟ್ಟುವ ನದಿಗಳು ಬಲು ವೇಗವಾಗಿ ಹರಿಯುತ್ತವೆ. ಇವುಗಳಲ್ಲಿ ದೊಡ್ಡವು ಬ್‍ಜಿóಬ್, ಕೊಡೊರೀ, ಇನ್‍ಗುರೀ, ಟ್ಸ್ಕೆನಿಸ್-ಟ್ಸಾಲೀ ಮತ್ತು ರೀಯಾನೀ. ಇವು ಕಪ್ಪು ಸಮುದ್ರ ಸೇರುವ ನದಿಗಳು. ಕುರ, ಅರಗ್ವಿ, ಐಯೊರಿ, ಆಲeóÁನಿ-ಇವು ಕ್ಯಾಸ್ಪಿಯನ್ ಸಮುದ್ರ ಸೇರುವ ನದಿಗಳು. ಜಾರ್ಜಿಯದ ವಾಯುವ್ಯ ಕೊನೆಯಲ್ಲಿರುವ ರಿಟ್ಸ ಸರೋವರ ಪ್ರವಾಸಿಗಳ ಆಕರ್ಷಣೆ.

ಜಾರ್ಜಿಯದ ನಡುವಣ ತಗ್ಗು ಪ್ರದೇಶ ಸುರಾಮ್‍ಸ್ಕಿ ಪರ್ವತ ಶ್ರೇಣಿಯಿಂದ ಇಬ್ಭಾಗವಾಗಿದೆ. ಪಶ್ಚಿಮಕ್ಕಿರುವುದು ಕೋಲ್ಖಿಡ. ಇಲ್ಲಿಗೆ ರೈಯೊನಿ ಮತ್ತು ಇತರ ಹಲವು ನದಿಗಳು ಅಗಾಧ ಜಲದ ಮತ್ತು ಮಣ್ಣಿನ ರಾಶಿಯನ್ನು ತಂದು ಹಾಕುತ್ತವೆ. ಇದು ಜವುಗು ಪ್ರದೇಶ. ಪೂರ್ವ ಭಾಗ ಸ್ವಲ್ಪ ಎತ್ತರ. ಕುರ ಮತ್ತು ಅದರ ಉಪನದಿಗಳು ಇಲ್ಲಿ ಹರಿಯುತ್ತವೆ.
ದಕ್ಷಿಣದ ಸ್ವಾಭಾವಿಕ ವಿಭಾಗ ಪರ್ವತಗಳಿಂದಲೂ ಪ್ರಸ್ಥಭೂಮಿಗಳಿಂದಲೂ ಕೂಡಿದ್ದು. ಇವನ್ನು ತಗ್ಗು ಕಾಕಸಸ್ ಎಂದು ಕರೆಯಲಾಗಿದೆ. ಮುಖ್ಯ ಶ್ರೇಣಿಗಿಂತ ತಗ್ಗಿನಲ್ಲಿರುವ ಈ ಶ್ರೇಣಿಯ ಉನ್ನತ ಶಿಖರ ಬಾಲ್ ಅಬುಲ್ (10,830). ತಗ್ಗು ಕಾಕಸಸಿನ ಅಂಚಿನ ಕರಾವಳಿ ಜವುಗುಮಯ.

ವಾಯುಗುಣ: ಜಾರ್ಜಿಯದ ವಾಯುಗುಣ ವೈವಿಧ್ಯಪೂರಿತ. ಪಶ್ಚಿಮ ಭಾಗದಲ್ಲಿ ಸೋವಿಯೆತ್ ದೇಶದಲ್ಲೇ ಅತ್ಯಧಿಕ ಮಳೆ : ಪರ್ವತ ಪ್ರದೇಶದಲ್ಲಿ ವರ್ಷಕ್ಕೆ 100”, ಕರಾವಳಿಯಲ್ಲಿ 40”. ಇಲ್ಲಿ ಉಪೋಷ್ಣವಲಯದ ಲಕ್ಷಣಗಳಿವೆ. ಚಳಿಗಾಲ ತೀವ್ರವಲ್ಲ. ಬೇಸಗೆ ಬಲು ಬಿಸಿ, ಉಷ್ಣತೆ ಕಡಲ ದೂರ ಅಥವಾ ಎತ್ತರಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತದೆ.

ಸಸ್ಯಗಳು : ಎತ್ತರ ಹಾಗೂ ವಾಯುಗುಣವೈವಿಧ್ಯದಿಂದಾಗಿ ಮಣ್ಣು ಹಾಗೂ ಸಸ್ಯಗಳಲ್ಲೂ ವೈವಿಧ್ಯವುಂಟು. ಕೋಲ್ಖಿಡ ತಗ್ಗುಪ್ರದೇಶದಲ್ಲಿ ಬಿದಿರು, ತಾಳೆ, ನೀಲಗಿರಿ ಮರಗಳೂ ಹುಲ್ಲು ಮುಂತಾದ ಉಪೋಷ್ಣವಲಯದ ಮರಗಿಡಗಳೂ ಬೆಳೆಯುತ್ತವೆ. ಪರ್ವತಗಳ ಕೆಳ ಇಳಿಜಾರು ಪ್ರದೇಶದಲ್ಲಿ ಓಕ್, ಬೀಚ್ ಐವಿ ಮತ್ತು ಕ್ಲಿಮಾಟಿಸ್ ಬಳ್ಳಿಗಳು ದಟ್ಟವಾಗಿವೆ. ಸ್ವಲ್ಪ ಎತ್ತರದ ಪ್ರದೇಶದಲ್ಲಿರುವುವು ಶಂಕುಧಾರಿ ಕಾಡುಗಳು. ಇಲ್ಲಿ ಫಿರ್, ಸ್ಪೂಸ್ ಸಾಮಾನ್ಯ. ಇನ್ನೂ ಎತ್ತರಕ್ಕೆ ಹೋದರೆ ಕಾಣಸಿಗುವುವು ರೋಡೊಡೆಂದ್ರನ್ ಪೊದೆಗಳು, ಅಲ್ಲಲ್ಲಿ ಬಿರ್ಚ್ ಮತ್ತು ಜೂನಿಪರ್ ಇವೆ. ಅದಕ್ಕೂ ಮೇಲೆ ಆಲ್ಪೈನ್ ಹುಲ್ಲುಗಾವಲುಗಳೂ ತುತ್ತತುದಿಯಲ್ಲಿ ಬಂಡೆ ಮತ್ತು ಹಿಮವೂ ಇವೆ.

ಜಾರ್ಜಿಯದ ಕೃಷಿಪ್ರದೇಶ ಇತ್ತೀಚೆಗೆ ವಿಸ್ತಾರಗೊಂಡಿದೆ. 1913ರಲ್ಲಿ 7,41,200 ಹೆಕ್ಟೇರ್ ನೆಲ ಸಾಗುವಳಿಗೆ ಒಳಪಟ್ಟಿತ್ತು. 1950ರಲ್ಲಿ ಇದರ ವಿಸ್ತೀರ್ಣ 9,13,600 ಹೆಕ್ಟೇರ್. ಇದರಲ್ಲಿ 7,60,100 ಹೆಕ್ಟೇರುಗಳು ಧಾನ್ಯ ಬೆಳೆಗೆ ಮೀಸಲು. 22,500 ಹೆಕ್ಟೇರ್ ಪ್ರದೇಶದಲ್ಲಿ ಸಿಟ್ರಸ್ ಹಣ್ಣುಗಳ ತೋಟಗಳೂ, 52,000 ಹೆಕ್ಟೇರ್‍ಗಳಲ್ಲಿ ಚಹ ತೋಟಗಳೂ ಇವೆ. ಜಾರ್ಜಿಯದ ವಾರ್ಷಿಕ ಚಹ ಉತ್ಪಾದನೆ 31,000 ಮೆಟ್ರಿಕ್ ಟನ್. ಕಪ್ಪು ಸಮುದ್ರದ ಕರಾವಳಿ ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಉಪೋಷ್ಣವಲಯ ವಾಯುಗುಣವಿರುವುದರಿಂದ ಅಲ್ಲಿ ಇವನ್ನು ಬೆಳೆಯುವುದು ಸಾಧ್ಯ. ಈ ತೀರಪ್ರದೇಶದ ದಕ್ಷಿಣ ಭಾಗದಲ್ಲಿ ತಂಬಾಕನ್ನು ಬೆಳೆಯುತ್ತಾರೆ. ಜೋಳ ಮತ್ತು ಹಿಪ್ಪನೇರಳೆಯೂ ಬೆಳೆಯುತ್ತವೆ.

ಜಾರ್ಜಿಯದ ಕೃಷಿನೆಲದಲ್ಲಿ 99.5% ಜಮೀನು ಸಾಮೂಹಿಕ ವ್ಯವಸಾಯಕ್ಕೆ ಒಳಪಟ್ಟಿದೆ. ಪಶುಪಾಲನೆಯೂ ಒಂದು ಮುಖ್ಯ ಕಸಬು.

ಜಾರ್ಜಿಯ ಗಣರಾಜ್ಯದಲ್ಲಿ ಅಪಾರವಾದ ಖನಿಜ ಸಂಪತ್ತು ಉಂಟು. ಚೀಯಾತುರ ಮ್ಯಾಂಗನೀಸ್ ಗಣಿ ವಿಶ್ವದಲ್ಲೇ ಅತ್ಯಂತ ದೊಡ್ಡ ಮ್ಯಾಂಗನೀಸ್ ಗಣಿಗಳಲ್ಲೊಂದು. ಟ್ಕಿಬೂಲಿ ಮತ್ತು ಟೆಕ್ವಾರ್ಜಾಲಿ ಸುತ್ತ ಕಲ್ಲಿದ್ದಲು ಗಣಿಗಳಿವೆ. ಪೂರ್ವದಲ್ಲಿ ಮೀರ್ಜಾನಿಯ ಬಳಿ ತೈಲ ನಿಕ್ಷೇಪವುಂಟು. ಬಟೂಮಿ (1,02,000) ಮುಖ್ಯ ತೈಲಪರಿಷ್ಕರಣ ಕೇಂದ್ರ. ಕುಟೈಸೀಯ (1,61,000) ಬಳಿ ಬೇರಿಯಮ್, ಆಂಡಿಸೈಟ್, ಕಯೊಲಿನ್ ಸಿಗುತ್ತವೆ. ರಸ್ಟಾವೀಯಲ್ಲಿ 1950ರಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ತೆರೆದಾಗಿನಿಂದ ಜಾರ್ಜಿಯದಲ್ಲಿ ಭಾರಿ ಕೈಗಾರಿಕೆಗಳು ಶೀಘ್ರವಾಗಿ ಬೆಳೆದಿವೆ. ಬಾಕುವಿನ ತೈಲಕೈಗಾರಿಕೆಗೆ ಮುಖ್ಯವಾದ ಉಕ್ಕಿನ ಕೊಳವೆಗಳು ವಿಶೇಷವಾಗಿ ರಸ್ಟಾವೀಲ್ಲಿ ತಯಾರಾಗುತ್ತವೆ. ಜೆóಸ್ಟಾಫೋನಿ ಫೆರೊಅಲಾಯ್ ಕೈಗಾರಿಕಾ ಕೇಂದ್ರ. ಟ್‍ಬಿಲಿಸೀಯಲ್ಲಿ ಯಂತ್ರ ಸಲಕರಣೆಗಳು ತಯಾರಾಗುತ್ತವೆ. ಬಟೂಮೀ, ಟ್‍ಬಿಲಿಸೀ ಮತ್ತು ರಸ್ಟಾವೀಯಲ್ಲಿ (1,02,000) ರಾಸಾಯನಿಕ ಕೈಗಾರಿಕೆ ಬೆಳೆದಿದೆ. ಇನ್ಗುರೀ ಕಾಗದ ತಯಾರಿಕಾ ಕೇಂದ್ರ. ಟ್‍ಬಿಲಿಸೀ, ವನಿಯರ್ ಮತ್ತು ಮಟ್ಸ್‍ಖೇಟದಲ್ಲಿ ಪೀಠೋಪಕರಣ, ವಾದ್ಯಗಳು ತಯಾರಾಗುತ್ತವೆ. ಜವಳಿ ಮತ್ತು ಆಹಾರ ಕೈಗಾರಿಕೆ ಅನೇಕ ಕಡೆಗಳಲ್ಲಿ ಸ್ಥಾಪಿತವಾಗಿವೆ. ವಿದ್ಯುತ್ತು ಹೇರಳವಾಗಿ ಉತ್ಪಾದನೆಯಾಗುತ್ತದೆ.

ಕಪ್ಪು ಸಮುದ್ರದ ತೀರದಲ್ಲಿ ಟುವಾಪ್ಸೇಯಿಂದ (51,000) ಸುಕಮೀಯ (1,02,000) ವರೆಗೂ ಅಲ್ಲಿಂದ ಟ್‍ಬಿಲಿಸೀಯವರೆಗೂ ಮುಖ್ಯ ರೈಲುಮಾರ್ಗವುಂಟು. ಇದರಿಂದ ಕವಲೊಡೆಯುವ ರೈಲುಮಾರ್ಗಗಳು ಹಲವಾರು. ಆರ್ಮೇನಿಯದಲ್ಲಿರುವ ಯೆರವಾನ್‍ಗೂ ತುರ್ಕಿ ಇರಾನ್‍ಗಳಿಗೂ ಬಟೂಮೀ ಪಾಟೀ (46,000) ಟ್‍ಕ್ವಾರ್ಚಲೀ ಮತ್ತು ಚೀಯಾಟುಗೂ (27,000) ರೈಲು ಮಾರ್ಗಗಳಿವೆ. ಟ್‍ಬಿಲಿಸೀಯಿಂದ ಅರ್ಜಾನಕಿಡ್‍ಜóಕ್ಕೂ ಕುಟೈಸೀಯಿಂದ ಅರ್ಜಾನಕಿಡ್‍ಜûಕ್ಕೂ ಸುಕಮೀಯಿಂದ ಚರ್‍ಕೆಸ್‍ಗೂ ಹೆದ್ದಾರಿಗಳುಂಟು. ಟ್‍ಬಿಲಿಸೀ ಮುಖ್ಯ ವಿಮಾನ ನಿಲ್ದಾಣ.
ಜಾರ್ಜಿಯನ್ನರು ಪ್ರಾಚೀನ ಹಾಗೂ ಸುಸಂಸ್ಕøತ ಜನಾಂಗ. ಇವರು ಒಟ್ಟು ಜನಸಂಖ್ಯೆಯ 3/5ರಷ್ಟು ಇದ್ದಾರೆ. ಇವರಲ್ಲದೆ ರಷ್ಯನರೂ ಆರ್ಮೇನಿಯನರೂ ಉಕ್ರೇನಿಯನರೂ ಆಜûರ್‍ಬೈಜಾóನ್ ತುರ್ಕರೂ ಆಸೀಷಿಯನರೂ ಇದ್ದಾರೆ.
(ಕೆ.ಆರ್.ಆರ್.)

ಇತಿಹಾಸ : ಜಾರ್ಜಿಯದ ಸಾಂಸ್ಕøತಿಕ ಮತ್ತು ರಾಜಕೀಯ ಇತಿಹಾಸ ಪ್ರಾಚೀನವಾದ್ದು. ಪ್ರಾಚೀನ ಶಿಲಾಯುಗದ ಕೊನೆಯ ಮತ್ತು ನವಶಿಲಾಯುಗದ ಕಾಲದಿಂದಲೂ ಇಲ್ಲಿ ಮಾನವ ಸಮಾಜ ಬೆಳೆದು ಬಂದಿದೆ. ಕೋಲ್ಖಿಡ ಪ್ರದೇಶದಲ್ಲೂ ಖ್ರಾನಿ ಕಣಿವೆಯಲ್ಲೂ ದಕ್ಷಿಣ ಆಸಿಷಿಯದಲ್ಲೂ ನವಶಿಲಾಯುಗದ ಹಲವು ನೆಲೆಗಳನ್ನು ಉತ್ಖನನ ಮಾಡಲಾಗಿದೆ. ಅಲ್ಲೆಲ್ಲ ಹಲವು ಗುಂಪುಗಳು ನೆಲೆಸಿದ್ದುವು. ಆ ಜನರು ವ್ಯವಸಾಯ, ಪಶುಪಾಲನೆಗಳಲ್ಲಿ ನಿರತರಾಗಿದ್ದರು. ಅವರು ಧಾನ್ಯ ಬೆಳೆಯುತ್ತಿದ್ದರೆಂಬುದಕ್ಕೆ ಆಧಾರಗಳು ದೊರೆತಿವೆ. ಕಾಕಸಸ್ ಪ್ರದೇಶ ಪ್ರಾಚೀನ ಕಾಲದಲ್ಲಿ ಲೋಹಗಾರಿಕೆಯ ತವರೆಂದು ಪರಿಗಣಿತವಾಗಿತ್ತು. ಕ್ರಿ.ಪೂ.2ನೆಯ ಸಹಸ್ರಮಾನದ ಆರಂಭದಲ್ಲಿ ಜಾರ್ಜಿಯದಲ್ಲಿ ಕಂಚಿನ ಯುಗ ಆರಂಭವಾಯಿತು. ಮಧ್ಯ ಜಾರ್ಜಿಯದಲ್ಲಿ ಪಶುಪಾಲನೆಯಲ್ಲಿ ನಿರತವಾಗಿದ್ದ ಗುಂಪುಗಳ ನಾಯಕರು ಐಶ್ವರ್ಯವಂತರಾಗಿರುತ್ತಿದ್ದರು. ಅವರ ಸಮಾಧಿಗಳಲ್ಲಿ ಚಿನ್ನ ಬೆಳ್ಳಿ ಪಾತ್ರೆಗಳು ದೊರಕಿವೆ. ಕೆಲವು ಪಾತ್ರೆಗಳ ಮೇಲೆ ಅವರ ಧಾರ್ಮಿಕ ಆಚರಣೆಗಳ ಚಿತ್ರಗಳನ್ನು ಕೊರೆಯಲಾಗಿದೆ. ಅವರ ಮೇಲೆ ಏಷ್ಯದ ಆಚರಣೆಗಳ ಪ್ರಭಾವ ಬಿದ್ದಿದ್ದಿರಬಹುದು.

ಕ್ರಿ.ಪೂ. ಒಂದನೆಯ ಸಹಸ್ರಮಾನದಲ್ಲಿ ಜಾರ್ಜಿಯನರ ಬಗ್ಗೆ ಉಲ್ಲೇಖ ಅಸ್ಸೀರಿಯನರ ಬರೆವಣಿಗೆಗಳಲ್ಲಿ ಕಂಡುಬರುತ್ತದೆ. ಕ್ರಿ.ಪೂ.7ನೆಯ ಶತಮಾನದಲ್ಲಿ ಸಿಮೆರಿಯನ್ ಆಕ್ರಮಣದ ಫಲವಾಗಿ ಆನಟೋಲಿಯದ ಕಡೆಯಿಂದ ಬಂದ ಗುಂಪುಗಳು ಕುರ ಕಣಿವೆಯ ಆದಿವಾಸಿಗಳೊಂದಿಗೆ ಬೆರೆತವು. ಈಗಿನ ಕಾರ್ಟಲೀನಿಯ ಮತ್ತು ಕಾಕ್ರೀಷಿಯ ಪ್ರದೇಶದಲ್ಲಿ ಐಬೀರಿಯ ರಾಜ್ಯ ಬೆಳೆಯಿತು. ಸಮ್‍ಟ್ಸ್‍ಕೆ ಮತ್ತು ನೈಋತ್ಯ ಜಾರ್ಜಿಯದ ಇತರ ಪ್ರದೇಶಗಳು ಇದರಲ್ಲಿ ಸೇರಿದ್ದುವು. ಗ್ರೀಕರು ಜಾರ್ಜಿಯದ ಕಪ್ಪು ಸಮುದ್ರತೀರದಲ್ಲಿ ಅನೇಕ ವಸಾಹತುಗಳನ್ನು ಕ್ರಿ.ಪೂ.6 ಮತ್ತು 5ನೆಯ ಶತಮಾನಗಳಲ್ಲಿ ಸ್ಥಾಪಿಸಿದರು. ಕ್ರಿಸ್ತಶಕದ ಆರಂಭದ ವೇಳೆಗೆ ಕಾಲ್ಚಿಸ್ ಮತ್ತು ಕಪ್ಪು ಸಮುದ್ರ ತೀರ ಪ್ರದೇಶ ರೋಮನ್ ಚಕ್ರಾಧಿಪತ್ಯಕ್ಕೆ ಸೇರಿತ್ತು. ಸುಮಾರು 330ರ ವೇಳೆಗೆ ಜಾರ್ಜಿಯನರು ಕ್ರೈಸ್ತ ಮತವನ್ನು ಅವಲಂಬಿಸಿದರು. ಅನಂತರ ಸುಮಾರು 300 ವರ್ಷಗಳ ಕಾಲ ಪರ್ಷಿಯ ಮತ್ತು ಬಿಜಾóಂಟೀನ್ ಚಕ್ರಾಧಿಪತ್ಯಗಳ ಸೆಣಸಾಟಕ್ಕೆ ಜಾರ್ಜಿಯ ನಿಮಿತ್ತವಾಗಿತ್ತು. ಅಲ್ಲಿ ಪರ್ಷಿಯದ ಪ್ರಭಾವವೇ ಹೆಚ್ಚಾಗಿದ್ದರೂ ಜಾರ್ಜಿಯದ ಪಶ್ಚಿಮ ಭಾಗ (ಲಾಜೀಕ) ಬಿಜಾóಂಟಿಯಂ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿ ಕ್ರೈಸ್ತಮತವನ್ನು ಅವಲಂಬಿಸಿ, ಆ ಮತದ ಅತ್ಯಂತ ಪ್ರಾಚೀನ ಚರ್ಚನ್ನು ಸ್ಥಾಪಿಸಿತು.

 	ಜಾರ್ಜಿಯವು ಪರ್ಷಿಯ ಸಾಮ್ರಾಜ್ಯದ ಹತೋಟಿಯಲ್ಲಿದ್ದಾಗ ಕ್ರಿ.ಶ.5ನೆಯ ಶತಮಾನದ ಅಂತ್ಯಭಾಗದಲ್ಲಿ ಸಾಮಂತ ರಾಜನಾಗಿದ್ದ ವಾಕ್ಟಾಂಗ್ ಗಾರ್ಜಾಸ್ಲಾನಿ ಸ್ವಾತಂತ್ರ್ಯ ಸಾರಿಕೊಂಡು ಜಾರ್ಜಿಯದಲ್ಲಿ ರಾಷ್ಟ್ರೀಯ ಪ್ರಭುತ್ವ ಸ್ಥಾಪಿಸಿ ಪ್ರಸಿದ್ಧನಾದ. ಆದರೆ ಸಾಸಾನಿಯನ್ ದೊರೆ 1ನೆಯ ಖುಸ್ರೋ (531-579) ಜಾರ್ಜಿಯದ ರಾಷ್ಟ್ರೀಯ ಪ್ರಭುತ್ವವನ್ನು ನಾಶಮಾಡಿದ. ಬಳಿಕ 300 ವರ್ಷಗಳ ಕಾಲ ಜಾರ್ಜಿಯ ಅನೇಕ ಪಾಳೆಯಪಟ್ಟುಗಳಾಗಿ ಒಡೆದು, ಇರಾನಿಯನರ, ಬಿಜಾóಂಟಿಯನ್ನರ ಆಡಳಿತಕ್ಕೆ ಒಳಪಟ್ಟಿತ್ತು. ಅರಬರು ಪ್ರಬಲರಾದಾಗ ಜಾರ್ಜಿಯ ಅವರ ಸ್ವಾಧೀನಕ್ಕೆ ಬಂತು. 7ನೆಯ ಶತಮಾನದಿಂದ 10ನೆಯ ಶತಮಾನದವರೆಗೆ ಅರಬರು ಜಾರ್ಜಿಯವನ್ನು ಆಳುತ್ತಿದ್ದರು. 654ರ ಅನಂತರ ಜಾರ್ಜಿಯದ ಮುಖ್ಯ ಪಟ್ಟಣವಾದ ಟ್‍ಬಿಲಿಸೀಯಲ್ಲಿ ಅರಬರ ಖಲೀಫರು ಅಮೀರ್ ಪ್ರಭುತ್ವ ಸ್ಥಾಪಿಸಿದರು. ಜಾರ್ಜಿಯದ ಜನತೆಯ ಒಂದು ಭಾಗ ಇಸ್ಲಾಮ್ ಧರ್ಮವನ್ನು ಅವಲಂಬಿಸಿ, ಆ ಮಠದ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಯಿತು.

ಸಾತಂತ್ರ್ಯ ಕಳೆದುಕೊಂಡಿದ್ದ ಜಾರ್ಜಿಯದ ಜನತೆ ಮುಂದಿನ ಕೆಲವು ಶತಮಾನದಗಳ ಕಾಲದಲ್ಲಿ ರಾಷ್ಟ್ರೀಯ ಭಾವನೆಗಳನ್ನು ರೂಪಿಸಿಕೊಂಡು ಜಾರ್ಜಿಯದ ಏಕತೆ ಸ್ವಾತಂತ್ರ್ಯಗಳನ್ನು ಸಾಧಿಸಿಕೊಳ್ಳಲು ಯತ್ನಿಸಿತು. 975ರಿಂದ 1014ರ ವರೆಗೆ ದೊರೆಯಾಗಿದ್ದ 3ನೆಯ ಬಗ್ರಾತ್ ಪೂರ್ವ ಮತ್ತು ಪಶ್ಚಿಮ ಜಾರ್ಜಿಯ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾದ. ಆದರೆ ಟ್‍ಬಿಲಿಸೀ 1122 ರವೆರೆಗೆ ಅರಬರ ವಶದಲ್ಲೇ ಇತ್ತು.

10ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಜಾರ್ಜಿಯದಲ್ಲಿ ಶಾಂತಿ ನೆಲಸಿದ್ದರಿಂದ ಜಾರ್ಜಿಯನ್ ಸಂಸ್ಕøತಿ ವಿಕಾಸಗೊಳ್ಳಲು ಸಾಧ್ಯವಾಯಿತು. ಆಗಿನ 300 ವರ್ಷಗಳು ಜಾರ್ಜಿಯದ ಇತಿಹಾಸದಲ್ಲಿ ಸುವರ್ಣಯುಗವೆಂದು ಹೇಳಬಹುದು. ಆಗಿನ ಶ್ರೇಷ್ಠ ದೊರೆಗಳಲ್ಲಿ ಎರಡನೆಯ ಡೇವಿಡ್ (ಆಳ್ವಿಕೆ 1089-1125) ಮತ್ತು ರಾಣಿ ಟಮಾರ ಮುಖ್ಯರು. ರಾಣಿ ಟಮಾರಳ ಆಳ್ವಿಕೆಯ ಕಾಲದಲ್ಲಿ (1184-1213) ಜಾರ್ಜಿಯದ ಪ್ರಾಬಲ್ಯ ಮತ್ತು ಪ್ರತಿಷ್ಠೆ ಪರಾಕಾಷ್ಠೆ ಮುಟ್ಟಿದುವು. ರಾಜ್ಯದ ಗಡಿ ಆಜûರ್‍ಬೈಜಾóನಿನಿಂದ ಚರ್‍ಕೇಷಿಯದವರೆಗೆ, ಎನ್‍ಜುóರಮ್‍ನಿಂದ ಖರೋವಬಾದ್‍ವರೆಗೆ ಪ್ರಸರಿಸಿ, ಅಖಿಲ ಕಾಕೇಷಿಯನ್ ಸಾಮ್ರಾಜ್ಯವಾಗಿ ಮೆರೆಯಿತು.

ಆದರೆ 1220ರ ಅನಂತರ ಮಂಗೋಲರು ಟ್ರಾನ್ಸ್‍ಕಾಕೇಷಿಯದ ಮೇಲೆ ದಾಳಿ ನಡೆಸಿದಾಗ, ಜಾರ್ಜಿಯದ ಸುವರ್ಣಯುಗ ಕೊನೆಗೊಂಡಿತು. ಪೂರ್ವ ಜಾರ್ಜಿಯ ಸ್ವಾತಂತ್ರ್ಯ ಕಳೆದುಕೊಂಡು ಸಾಮಂತ ರಾಜ್ಯವಾಗಬೇಕಾಯಿತು. ಜಾರ್ಜಿಯದ 5ನೆಯ ಜಿಯಾರ್ಜಿಯ ಆಳ್ವಿಕೆಯ ಕಾಲದಲ್ಲಿ (1314-46) ಸ್ವಲ್ಪ ಮಟ್ಟಿಗೆ ಪುರುಜ್ಜೀವನವಾದರೂ 1386-1403ರ ಮಧ್ಯೆ ತೈಮೂರನ ದಾಳಿಯ ಪರಿಣಾಮವಾಗಿ ಜಾರ್ಜಿಯದ ಆರ್ಥಿಕ ಮತ್ತು ಸಾಂಸ್ಕøತಿಕ ಜೀವನ ಅಸ್ತವ್ಯಸ್ತವಾಯಿತು. ಮತ್ತೆ ಜಾರ್ಜಿಯ ಚೇತರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಒಂದನೆಯ ಅಲೆಗ್ಸಾಂಡರ್ (ಆಳ್ವಿಕೆ 1412-43) ಜಾರ್ಜಿಯವನ್ನು ಒಂದುಗೂಡಿಸಿದರೂ, ಅವನ ಮಕ್ಕಳ ಕಾಲದಲ್ಲಿ ರಾಜ್ಯ ಛಿದ್ರವಾಯಿತು.

1453ರಲ್ಲಿ ಆಟೊಮನ್ ತುರ್ಕರು ಕಾನ್‍ಸ್ಟಾಂಟಿನೋಪಲ್ ಪಟ್ಟಣವನ್ನು ವಶಪಡಿಸಿಕೊಂಡಾಗ ಜಾರ್ಜಿಯದ ಕ್ರೈಸ್ತಪ್ರಪಂಚದಿಂದ ಬೇರೆಯಾಗಿ 18ನೆಯ ಶತಮಾನದ ಅಂತ್ಯದವರೆಗೂ ತುರ್ಕಿ ಸಾಮ್ರಾಜ್ಯದ ಪ್ರಾಂತ್ಯವಾಗಿ ಉಳಿಯಿತು. ರಷ್ಯನ್ ದೊರೆಗಳು-ಅದರಲ್ಲೂ ಐವಾನ್-ಜಾರ್ಜಿಯದಲ್ಲಿ ಆಸಕ್ತಿ ವಹಿಸಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಆ ದೇಶವನ್ನು ಮುಸ್ಲಿಮರ ಹಿಡಿತದಿಂದ ತಪ್ಪಿಸಲು, ಜನತೆಯ ಹಿಂಸೆ ಕೋಟಲೆಗಳನ್ನು ನಿವಾರಿಸಲು ಮತ್ತು ಜಾರ್ಜಿಯದ ವಿಭಜನೆಯನ್ನು ತಡೆಯಲು ರಷ್ಯನರಿಗೆ ಸಾಧ್ಯವಾಗಲಿಲ್ಲ. 1578ರಲ್ಲಿ ಮುಸ್ಲಿಮರು ಟ್ರಾನ್ಸ್‍ಕಾಕೇಷಿಯದ ಮೇಲೆ ದಾಳಿಮಾಡಿ, ಟ್‍ಬಿಲಿಸೀಯನ್ನು ವಶಪಡಿಸಿಕೊಂಡರು. ಮೊಖ್ರಾಮ್ ರಾಜವಂಶ 1658ರಿಂದ 1723ರವರೆಗೆ ಟ್‍ಬಿಲಿಸೀಯನ್ನು ರಾಜಧಾನಿಯಾಗಿ ಮಾಡಿಕೊಂಡು ರಾಜ್ಯವಾಳಿತು. ಆ ವಂಶಕ್ಕೆ ಸೇರಿದ 6ನೆಯ ವಾಂಗ್‍ಟಾಂಗನ ಕಾಲದಲ್ಲಿ ಜಾರ್ಜಿಯಕ್ಕೆ ಮುದ್ರಣ ಕಲೆ ಬಂತು. ಅವನು ನ್ಯಾಯ ವ್ಯವಸ್ಥೆ ಸ್ಥಾಪಿಸಿದ. ಜಾರ್ಜಿಯ ಚರಿತ್ರೆಯನ್ನು ವಿದ್ವಾಂಸರಿಂದ ಬರೆಯಿಸಿದ.

1783ರಲ್ಲಿ ಜಾರ್ಜಿಯ ರಷ್ಯದ ಅಧಿಪತ್ಯಕ್ಕೆ ಸೇರಿತು. ಜಾರ್ಜಿವಿಸ್ಕ್ ಒಪ್ಪಂದದ ಪ್ರಕಾರ ಜಾರ್ಜಿಯದ ಸ್ವಾತಂತ್ರ್ಯ ಮತ್ತು ಏಕತೆಯನ್ನು ಕಾಪಾಡುವ ಹೊಣೆಯನ್ನು ರಷ್ಯ ಹೊತ್ತಿತು. ಜಾರ್ಜಿಯದ ದೊರೆ 2ನೆಯ ಎರೆಕಲ್ ರಷ್ಯದ ಸಾರ್ವಭೌಮತ್ವವನ್ನು ಒಪ್ಪಿಕೊಂಡ. ಆದರೆ ಪರ್ಷಿಯನ್ ಸೇನೆಗಳು ಜಾರ್ಜಿಯದ ಮೇಲೆ ಆಕ್ರಮಣ ನಡೆಸಿ 1795ರಲ್ಲಿ ಟ್‍ಬಿಲಿಸೀಯನ್ನು ಕೊಳ್ಳೆ ಹೊಡೆದಾಗ ಎರೆಕಲನ ಸಹಾಯಕ್ಕೆ ರಷ್ಯನರು ಬರಲಿಲ್ಲ. 1798ರಲ್ಲಿ ಎರೆಕಲ್ ಹತಾಶನಾಗಿ ಸತ್ತ. ಅವನ ಮಗ ರಾಜ್ಯಾಧಿಕಾರವನ್ನೆಲ್ಲ ರಷ್ಯದ ಹುಚ್ಚುದೊರೆ 1ನೆಯ ಪಾಲ್‍ಗೆ ವಹಿಸಿಕೊಡಲು ನಡೆಸಿದ ಪ್ರಯತ್ನ ವಿಫಲವಾಯಿತು. 1801ರಲ್ಲಿ ಜಾರ್ಜಿಯ ರಷ್ಯದ ಮಿಲಿಟರಿ ಆಡಳಿತಕ್ಕೆ ಒಳಪಟ್ಟಿತು. ಬಾಗ್ರಟಿಡ್ ವಂಶ ರಾಜ್ಯವನ್ನು ಕಳೆದುಕೊಂಡಿತು. ಈ ಆಡಳಿತದ ವಿರುದ್ಧ ಜಾರ್ಜಿಯನರು ದಂಗೆ ಎದ್ದರು. ಜಾರ್ಜಿಯದ ರಾಷ್ಟ್ರೀಯತೆ ಆ ಕಾಲದಲ್ಲಿ ನಾನಾ ರೂಪದಲ್ಲಿ ವ್ಯಕ್ತವಾಯಿತು. ಆದರೆ ರಷ್ಯನ್ನರು ಈ ರಾಷ್ಟ್ರೀಯ ಭಾವನೆಗಳನ್ನು ನಿರ್ಲಕ್ಷಿಸಿ 1810ರಲ್ಲಿ ಇಮರೀಷಿಯ, 1829ರಲ್ಲಿ ಗುರಿಯ, 1857ರಲ್ಲಿ ಮಿಂಗ್ರೆಲಿಯ, 1858ರಲ್ಲಿ ಸ್ಪಾನೀಷಿಯ, 1864ರಲ್ಲಿ ಅಬ್‍ಖೇಜಿûಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1877-78ರಲ್ಲಿ ದಂಡಯಾತ್ರೆಗಳಲ್ಲಿ ಕಪ್ಪುಸಮುದ್ರದ ರೇವುಪಟ್ಟಣಗಳಾದ ಪಾಟೀ, ಬಟೂಮಿಗಳನ್ನೂ ಇನ್ನು ಕೆಲವು ಪ್ರದೇಶಗಳನ್ನೂ ಸ್ವಾಧೀನಪಡಿಸಿಕೊಂಡರು.

ಇರಾನ್ ಮತ್ತು ತುರ್ಕಿಯ ಮೇಲೆ ರಷ್ಯನರು ಸತತವಾಗಿ ಯುದ್ಧ ಮಾಡಿ ಜಾರ್ಜಿಯ ರಾಜ್ಯದ ಅಖಂಡತೆಯನ್ನು ರಕ್ಷಿಸಿದರು. 1845ರಿಂದ 1854ರವರೆಗೆ ರಷ್ಯದ ವೈಸ್‍ರಾಯ್ ಆಗಿದ್ದ ರಾಜಕುಮಾರ ವೊರಾಂಟ್ಸಾಫನ ಕಾಲದಲ್ಲಿ ಜಾರ್ಜಿಯದ ವಾಣಿಜ್ಯ ಕುದುರಿತು. 1861ರಲ್ಲಿ ರಷ್ಯದ ರೈತರು ಜೀತಪದ್ಧತಿಯಿಂದ ಮುಕ್ತರಾದ ಮೇಲೆ 1864ರಲ್ಲಿ ಜಾರ್ಜಿಯದ ರೈತರೂ ಸ್ವಾತಂತ್ರ್ಯ ಪಡೆದರು. ವಿದ್ಯಾಭ್ಯಾಸ ಮತ್ತು ಪಾಶ್ಚಾತ್ಯ ಪ್ರಭಾವಗಳಿಗೆ ಒಳಗಾಗಿ ಜಾರ್ಜಿಯದ ಜನ ಕಂದಾಚಾರ ಪದ್ಧತಿಗಳನ್ನು ಬಿಟ್ಟರು. 1872ರಲ್ಲಿ ಟ್‍ಬಿಲಿಸೀ ಮತ್ತು ಪಾಟೀಗಳ ಮಧ್ಯೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ರಷ್ಯನ್, ಅಮೆರಿಕನ್ ಮತ್ತು ಪಶ್ಚಿಮ ಯೂರೋಪ್ ಕಂಪನಿಗಳು ಗಣಿಗಾರಿಕೆ ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಿದುವು. ಆದರೆ ರಷ್ಯನ್ ಚಕ್ರವರ್ತಿ 3ನೆಯ ಅಲೆಗ್ಸಾಂಡರ್ (1881-94) ಜಾರ್ಜಿಯದ ರಾಷ್ಟ್ರೀಯತೆಯನ್ನು ಕಡೆಗಣಿಸಿ ಅದರ ಸಂಸ್ಕøತಿಯನ್ನು ನಾಶಮಾಡಿ ಅದರ ಸ್ಥಳದಲ್ಲಿ ರಷ್ಯನ್ ಸಂಸ್ಕøತಿಯನ್ನು ಹೇರಲು ಯತ್ನಿಸಿದಾಗ ಜಾರ್ಜಿಯನರು ದಂಗೆ ಎದ್ದರು. ಮಧ್ಯಮವರ್ಗದವರೂ ಕಾರ್ಮಿಕರೂ ರೈತರೂ ಒಂದುಗೂಡಿ ರಷ್ಯದ ನಿರಂಕುಶಾಧಿಕಾರದ ವಿರುದ್ಧ ರಾಷ್ಟ್ರೀಯ ಆಂದೋಲನ ನಡೆಸಿದರು. ಜಾರ್ಜಿಯದ ರಾಷ್ಟ್ರೀಯ ಚಳವಳಿ ಮೂರು ಪ್ರಕಾರಗಳಲ್ಲಿ ಹೊರಹೊಮ್ಮಿತು. ಮೊದಲನೆಯದು ಇಲಿಯ ಚಾವ್‍ಚವಾಡ್ಜೆಯ (1837-1907) ನಾಯಕತ್ವದ ಸಾಹಿತ್ಯಿಕ ಮತ್ತು ಸಾಮಾಜಿಕ ಚಳವಳಿ; ಎರಡನೆಯದ ಜಾರ್ಜಿಟ್ಸೆರೆಟೆಲಿಯ (1842-1900) ನೇತೃತ್ವದ ಉಗ್ರಪಂಥ; ಮೂರನೆಯದು ನ್ಯಾಯಬಾಹಿರವೆಂದು ಘೋಷಿಸಲ್ಪಟ್ಟ ಅತ್ಯಂತ ತೀವ್ರಗಾಮಿಯಾದ ಸಾಮಾಜಿಕ ಪ್ರಜಾಸತ್ತಾತ್ಮಕ ಪಕ್ಷ. ಈ ಪಕ್ಷಕ್ಕೆ ನೊ ಜೊóರ್ಡಾನಿಯ (1868-1953) ನಾಯಕ. ಮಾಕ್ರ್ಸ್ ತತ್ತ್ವಗಳನ್ನು ಅನುಸರಿಸುತ್ತಿದ್ದ ಈ ಪಕ್ಷಕ್ಕೆ 1898ರಿಂದ ಸ್ಟಾಲಿನ್ ಸದಸ್ಯನಾಗಿದ್ದ.

1905ರಲ್ಲಿ ರಷ್ಯದಲ್ಲಿ ಕ್ರಾಂತಿಯಾದಾಗ, ಜಾರ್ಜಿಯದಲ್ಲೂ ದಂಗೆ ಗಲಭೆಗಳು ಉಂಟಾದುವು. 1917ರಲ್ಲಿ ಸಂಭವಿಸಿದ ಬೋಲ್ಷೆವಿಕ್ ಕ್ರಾಂತಿಯ ಪರಿಣಾಮವಾಗಿ ಟ್ರಾನ್ಸ್‍ಕಾಕೇಷಿಯದ ಮೆನ್ಷೆವಿಕರು ಆಡಳಿತದಿಂದ ಹೊರಬಿದ್ದು ಹೊಸ ವ್ಯವಸ್ಥೆ ಮಾಡಿಕೊಂಡರು. 1918ರ ಮೇ 26ರಂದು ಜಾರ್ಜಿಯ ಪ್ರತ್ಯೇಕ ಸ್ವತಂತ್ರ ರಾಜ್ಯವೆಂದು ಘೋಷಿಸಿಕೊಂಡು ಜರ್ಮನರ ರಕ್ಷಣೆ ಪಡೆಯಿತು. ಆದರೆ 1918ರ ಅಂತ್ಯದಲ್ಲಿ ಜರ್ಮನರು ಸೋತಾಗ ಜಾರ್ಜಿಯ ಬ್ರಿಟಿಷರ ಹತೋಟಿಗೆ ಬಂದಿತು. 1920ರಲ್ಲಿ ಮಿತ್ರರಾಷ್ಟ್ರಗಳು ಜಾರ್ಜಿಯದ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿದುವು. ಆದರೆ ಬೋಲ್ಷೆವಿಕ್ ಕ್ರಾಂತಿ ಅಲ್ಲೂ ಜಯಪ್ರದವಾಯಿತು. 1921ರಲ್ಲಿ ಮಿತ್ರರಾಷ್ಟ್ರಗಳು ಜಾರ್ಜಿಯ ಗಣರಾಜ್ಯಕ್ಕೆ ಮನ್ನಣೆ ನೀಡಿದರೂ ಅಲ್ಲಿಯ ಬೋಲ್ಷೆವಿಕ್ ನಾಯಕನಾದ ಸ್ಟಾಲಿನನ ಅನುಮತಿಯಿಂದ ರಷ್ಯದ ಕೆಂಪುಸೇನೆ ಜಾರ್ಜಿಯವನ್ನು ಪ್ರವೇಶಿಸಿ ಫೆಬ್ರುವರಿ 25ರಂದು ಟ್‍ಬಿಲಿಸೀಯಲ್ಲಿ ಸೋವಿಯೆತ್ ಅಧಿಕಾರ ಸ್ಥಾಪಿಸಿತು. ಈ ಬದಲಾವಣೆಯ ಪರಿಣಾಮವಾಗಿ ಜಾರ್ಜಿಯ 1922ರ ಏಪ್ರಿಲ್ 12ರಿಂದ ಟ್ರಾನ್ಸ್‍ಕಾಕೇಷಿಯನ್ ಸೋವಿಯೆತ್ ಸಮಾಜವಾದಿಗಳ ಸದಸ್ಯತ್ವ ಪಡೆಯಿತು. 1936ರ ಡಿಸೆಂಬರ್ 5ರಂದು ಟ್ರಾನ್ಸ್‍ಕಾಕೇಷಿಯನ್ ಗಣರಾಜ್ಯ ವಿಸರ್ಜನೆಗೊಂಡಾಗ, ಜಾರ್ಜಿಯ ಗಣರಾಜ್ಯವಾಗಿ ರಷ್ಯದ ಸೋವಿಯೆತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ ಪೂರ್ಣ ಸದಸ್ಯತ್ವ ಪಡೆಯಿತು.

ರಷ್ಯದ ಸೋವಿಯೆತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಪ್ರಮುಖ ಗಣರಾಜ್ಯವಾದ ಜಾರ್ಜಿಯವು ಸಮಾಜದ ನಾನಾ ಕ್ಷೇತ್ರಗಳಲ್ಲಿ ವಿಶೇಷ ಪ್ರಗತಿ ಸಾಧಿಸಿದೆ. 20ನೆಯ ಶತಮಾನದ ಪೂರ್ವಾರ್ಧದ ಅಂತ್ಯದ ವೇಳೆಗೆ ಅನಕ್ಷರತೆ ನಿರ್ಮೂಲವಾಯಿತು. ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಅದು ಒಂದು ದಾಖಲೆಯನ್ನೇ ಸ್ಥಾಪಿಸಿದೆ. ಟ್‍ಬಿಲಿಸೀಯಲ್ಲಿರುವ ವಿಶ್ವವಿದ್ಯಾಲಯ ಅನೇಕ ಶಾಖೆಗಳಿಂದ ಕೂಡಿದೆ. ಅದು ಪ್ರಪಂಚದ ಉಚ್ಚಶಿಕ್ಷಣಕೇಂದ್ರಗಳಲ್ಲೊಂದು. ರಷ್ಯದ ವಿಜ್ಞಾನ ಅಕಾಡೆಮಿಯ ಶಾಖೆಯಾಗಿದ್ದ ಜಾರ್ಜಿಯನ್ ಅಕಾಡಮಿ 1941ರಲ್ಲಿ ಜಾರ್ಜಿಯನ್ ವಿಜ್ಞಾನ ಅಕಾಡೆಮಿಯಾಗಿ ಪರಿವರ್ತನೆಗೊಂಡಿತು. ಇದಲ್ಲದೆ ಕೈಗಾರಿಕಾ ಕ್ಷೇತ್ರದಲ್ಲಿ, ವ್ಯವಸಾಯ ಕ್ಷೇತ್ರದಲ್ಲಿ 1960ರಿಂದೀಚೆಗೆ ಜಾರ್ಜಿಯದ ಪ್ರಗತಿ ಇಮ್ಮಡಿಯಾಗಿ ಅದು ಒಕ್ಕೂಟದ ಹೆಮ್ಮೆಯ ಗಣರಾಜ್ಯವಾಗಿದೆ.						(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ